ಭಾಷ್ಯಂ, ಕೆ ಟಿ
	1895-1956. ಆಡಳಿತಗಾರ, ದೇಶಭಕ್ತ ಮತ್ತು ಕಾರ್ಮಿಕ ಮುಖಂಡ. ಕೆ. ತುಪ್ಪಲ್ ನರಸಿಂಹ ಅಯ್ಯಂಗಾರ್ ಭಾಷ್ಯಂ ಇವರ ಪೂರ್ಣ ಹೆಸರು. 1895 ಏಪ್ರಿಲ್ 12ರಂದು ಜನನ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. (1917) ಮತ್ತು ಮದರಾಸು ವಿಶ್ವವಿದ್ಯಾಲಯದಲ್ಲಿ ಬಿ.ಎಲ್. (1919) ಪದವಿಗಳನ್ನು ಪಡೆದರು. ಮುಂದೆ ಮೈಸೂರು ಸಂಸ್ಥಾನದ ಉನ್ನತ ನ್ಯಾಯಾಲಯದ ಅಡ್ವೊಕೇಟ್ ಆಗಿ ನಿಷ್ಣಾತರೆಂದು ಖ್ಯಾತರಾದರು. ಮಂಡ್ಯದಲ್ಲಿ ಸೇರಿದ್ದ (1938) ಮೈಸೂರು ಸಂಸ್ಥಾನದ ವಕೀಲರ ಸಮ್ಮೇಳನಾಧ್ಯಕ್ಷರಾಗಿದ್ದರು.

	1921ರಿಂದಲೇ ಇವರು ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಲಾರಂಭಿಸಿದರು. ಪ್ರಜಾಪ್ರತಿನಿಧಿ ಸಭೆಗೆ ಸದಸ್ಯರಾಗಿದ್ದರು (1926-39). ಭಾರತೀಯ ಮಹಿಳೆಯರ ಹಕ್ಕು ಬಾಧ್ಯತೆಗಳನ್ನು ಪರಿಶೀಲಿಸಲು ಸರ್ಕಾರ ಒಂದು ಸಮಿತಿ ರಚಿಸುವಂತೆ ಮಾಡಿದರು. ಬಿನ್ನಿಮಿಲ್ ಕಾರ್ಮಿಕ ಸಂಘ ಸ್ಥಾಪನೆಯಾಗಿ ಭಾಷ್ಯಂ ಅವರೇ ಅದರ ಅಧ್ಯಕ್ಷರಾಗಿ ಆಯ್ಕೆಯಾದರು (1929). ಮೈಸೂರು ಸ್ಟೇಟ್ ಲೇಬರ್ ಫೆಡರೇಷನ್ನಿನ ಅಧ್ಯಕ್ಷರಾಗಿ ಕಾರ್ಮಿಕ ಸಂಘಟನೆ ಮಾಡಿ ಕಾರ್ಮಿಕ ಸಂಘಗಳಿಗೆ ಸರ್ಕಾರ ಮನ್ನಣೆ ನೀಡಬೇಕೆಂದು ಪ್ರತಿಪಾದಿಸಿದರು. ಇವರ ಸತತ ಪ್ರಯತ್ನದಿಂದಾಗಿ ಮೈಸೂರು ಕಾರ್ಮಿಕ ಕಾನೂನು ಜಾರಿಗೆ ಬಂತು.

	ಮೈಸೂರು ಸಂಸ್ಥಾನದ ಯುವಕ ಸಮ್ಮೇಳನದ ಉಪಾಧ್ಯಕ್ಷರಾಗಿ (1930) ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿದ್ದರು. ಬೆಂಗಳೂರು ಪುರಸಭೆಯ ಸದಸ್ಯರಾಗಿದ್ದರು. (1930-39). ಇವರು ಮೈಸೂರು ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದಾಗ (1940) ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 173 ಸ್ಥಾನಗಳ ಪೈಕಿ ಮೈಸೂರು ಕಾಂಗ್ರೆಸ್ಸಿಗೆ 119 ಸ್ಥಾನಗಳನ್ನು ದೊರಕಿಸಿಕೊಟ್ಟರು. ಅದೇ ವರ್ಷ ಮಿರಜದಲ್ಲಿ ನಡೆದ ಪ್ರಜಾಪರಿಷತ್ತಿನ ಅಧಿವೇಶನದ ಅಧ್ಯಕ್ಷರಾಗಿದ್ದರು.
	ಮೈಸೂರು ಸಂಸ್ಥಾನದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿ ನಡೆದ ಚಳವಳಿಯಲ್ಲಿ ಅಗ್ರಪಾತ್ರವಹಿಸಿ ಹಲವು ಬಾರಿ ಸೆರೆಮನೆ ಸೇರಿದ್ದರು. ಈ ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರದ ಬಗ್ಗೆ ನಡೆದ ಹೋರಾಟದಲ್ಲೂ (1947) ಪ್ರಮುಖ ಪಾತ್ರವಹಿಸಿದ್ದರು. ಜವಾಬ್ದಾರಿ ಸರ್ಕಾರ ಸ್ಥಾಪಿತವಾಗಿ ಕೆ.ಸಿ. ರೆಡ್ಡಿಯವರ ನಾಯಕತ್ವದ ಮಂತ್ರಿಮಂಡಲ ರಚನೆಯಾದಾಗ ಇವರು ಅದರಲ್ಲಿ ಕಾನೂನು ಮತ್ತು ಕಾರ್ಮಿಕ ಖಾತೆಗಳ ಸಚಿವರಾಗಿ 1952ರ ತನಕ ಸೇವೆ ಸಲ್ಲಿಸಿದರು. 1948 ಜೂನ್‍ನಲ್ಲಿ ಸ್ಯಾನ್‍ಫ್ರಾನ್ಸಿಸ್ಕೊ ನಗರದಲ್ಲೂ 1949 ಜೂನ್‍ನಲ್ಲಿ ಜಿನೀವದಲ್ಲೂ ನಡೆದ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನಗಳಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಮೈಸೂರು ವಿಧಾನ ಪರಿಷತ್ತಿನ ಅಧ್ಯಕ್ಷರಾಗಿ ಅವಿರೋಧವಾಗಿ ಚುನಾಯಿತರಾದರು (1952). ವಿಧಾನ ಪರಿಷತ್ತಿನ ಅಧ್ಯಕ್ಷರಾಗಿದ್ದ ಕಾಲದಲ್ಲೇ 1956 ಮೇ 24ರಂದು ನಿಧನರಾದರು.																	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ